ದುರ್ಗಾಪುರ
ಪಶ್ಚಿಮ ಬಂಗಾಳ ರಾಜ್ಯದಲ್ಲಿ ಬದ್ರ್ವಾನ್ ವಿಭಾಗದ ಬದ್ರ್ವಾನ್ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಉ.ಅ. 230 29' ಮತ್ತು ಪೂ.ರೇ. 870 20' ಮೇಲೆ, ದಾಮೋದರ್ ನದಿತೀರದಲ್ಲಿ ಕಲ್ಕತ್ತದಿಂದ 171 ಕಿಮೀ. ದೂರದಲ್ಲಿದೆ. ಕಲ್ಕತ್ತ, ಬದ್ರ್ವಾನ್ ಮತ್ತು ಅಸನ್‍ಸೋಲ್‍ಗಳೊಂದಿಗೆ ರಸ್ತೆ ಮತ್ತು ರೈಲ್ವೆ ಸಂಪರ್ಕ ಹೊಂದಿರುವ ದುರ್ಗಾಪುರ ಭಾರತದ ಒಂದು ದೊಡ್ಡ ಉಕ್ಕು ಉತ್ಪಾದನ ಕೇಂದ್ರ. ಉಕ್ಕು ಕಾರ್ಖಾನೆಯಲ್ಲದೆ ಒಂದು ಕಲ್ಲಿದ್ದಲು ಶುದ್ಧೀಕರಣ ಕಾರ್ಖಾನೆ, ಅಲಾಯ್ ಮತ್ತು ವಿಶಿಷ್ಟ ಉಕ್ಕಿನ ಕಾರ್ಖಾನೆ. ಎರಡು ಶಾಖ ವಿದ್ಯುತ್ ಉತ್ಪಾದನ ಕೇಂದ್ರಗಳು, ಕನ್ನಡಕದ ಗಾಜಿನ ಕಾರ್ಖಾನೆ ಕಲ್ಲಿದ್ದಲು, ಯಂತ್ರ ಸಾಮಗ್ರಿಗಳ ಕಾರ್ಖಾನೆ, ಇಟ್ಟಿಗೆ ಮತ್ತು ಹೆಂಚು ಕಾರ್ಖಾನೆ ಇವೆ. ಇಲ್ಲಿ ಉತ್ಪಾದಿಸಲಾಗುವ ಕಲ್ಲಿದ್ದಲು ಕಿಟ್ಟದ ಅನಿಲವನ್ನು 175 ಕಿ.ಮೀ ಉದ್ದದ ಕೊಳವೆಯ ಮಾರ್ಗದ ಮೂಲಕ ಕಲ್ಕತ್ತಕ್ಕೆ ಒದಗಿಸಲಾಗುತ್ತದೆ. ದುರ್ಗಾಪುರದ ಬಳಿಯಲ್ಲಿ ದಾಮೋದರ ನದಿಯ ಮೇಲೆ ಕಟ್ಟಿರುವ ಕಟ್ಟೆಯಿಂದ ಪಶ್ಚಿಮ ಬಂಗಾಳದ ಜಮೀನಿಗೆ ನೀರಾವರಿ ಸೌಕರ್ಯ ದೊರೆತಿದೆ. 

	ಎರಡನೆಯ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಇಂಗ್ಲೆಂಡಿನ ನೆರವಿನಿಂದ ಇಲ್ಲಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸ್ಥಾಪಿಸಲಾಯಿತು. 

ಇಲ್ಲಿ ಬದ್ರ್ವಾನ್ ವಿಶ್ವವಿದ್ಯಾಲಯದ ವ್ಯಾಪ್ತಿಯೊಳಗೆ ಇರುವ ಇಂಜಿನಿಯರಿಂಗ್ ಕಾಲೇಜೂ ರವೀಂದ್ರ ಭಾರತಿ ವಿಶ್ವವಿದ್ಯಾಲಯದ ವ್ಯಾಪ್ತಿಯ ಸಂಗೀತ ಶಾಲೆಯೂ ಇವೆ.

	ಕಾರ್ಖಾನೆಗಳ ಪ್ರದೇಶದ ಉತ್ತರಕ್ಕೆ ದುರ್ಗಾಪುರ ಪಟ್ಟಣ ಇದೆ. ಇಲ್ಲಿ ಇಪ್ಪತ್ತು ಸಾವಿರಕ್ಕೂ ಮೀರಿ ಹೊಸ ನಿವಾಸಗಳ ರಚನೆಯಾಗಿದೆ. ಈ ಮನೆಗಳಲ್ಲಿ ಒಂಬತ್ತು ಪ್ರಕಾರಗಳಿವೆ. ಇವು ಇಲ್ಲಿಯ ಕಾರ್ಖಾನೆಗಳಲ್ಲಿ ವಿವಿಧ ಸ್ತರಗಳಲ್ಲಿ ಕೆಲಸಕ್ಕಿರುವ ಜನರ ವಸತಿಗಳು. ಈ ಪಟ್ಟಣದ ಜನಸಂಖ್ಯೆ 2,06,638 (1971)
(ಬಿ.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ